Coffee Rate: ಕಾಫಿ ದರ ದಿಢೀರ್ ಇಳಿಕೆ: ಜಾಗತಿಕ ಮಾರುಕಟ್ಟೆ ಆಘಾತ: ರೋಬಸ್ಟಾ, ಅರೇಬಿಕಾ ದರ ಪಾತಾಳಕ್ಕೆ – ಬೆಳೆಗಾರರಿಗೆ ಸಂಕಷ್ಟ! ಹೌದು ಬೆಳೆಗಾರರೇ ಬ್ರೆಜಿಲ್ ಕೊಯ್ಲಿನಿಂದ ಕಾಫಿ ಬೆಲೆಗಳು ಕುಸಿದಿದ್ದು, ಕರ್ನಾಟಕ ಬೆಳೆಗಾರರಿಗೆ ಭಾರಿ ನಷ್ಟ ಉಂಟಾಗಿದೆ. ರೋಬಸ್ಟಾ ಮತ್ತು ಅರೇಬಿಕಾ ದರ ಕುಸಿತಕ್ಕೆ ಮುಖ್ಯ ಕಾರಣಗಳೇನು ಇದರಿಂದ ಮುಂದಾಗುವ ಪರಿಣಾಮಗಳ ಬಗ್ಗೆ ಸಂಕ್ಷಿಪ್ತವಾಗಿ ಈ ಲೇಖನದಲ್ಲಿ ತಿಳಿಸಲಾಗಿದೆ.
ಸಕಲೇಶಪುರ, ಜುಲೈ 17, 2025: ಕರ್ನಾಟಕದ ಕಾಫಿ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆಗಳು (coffee rate) ಏಕಾಏಕಿ ಕುಸಿತ ಕಂಡಿದ್ದು, ಉತ್ಪಾದನಾ ವೆಚ್ಚಕ್ಕೂ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಪ್ರಮುಖವಾಗಿ ಅರೇಬಿಕಾ ಮತ್ತು ರೋಬಸ್ಟಾ ಎರಡೂ ಬಗೆಯ ಕಾಫಿಯ ಬೆಲೆಗಳು ಕುಸಿದಿದ್ದು, ಇದು ಮುಂದಿನ ಬೆಳೆ ನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ.
50% ಬೆಳೆ ದಾಸ್ತಾನು ಮಾಡಿದ ರೈತರಿಗೆ ಭಾರಿ ನಷ್ಟ??: ವರ್ಷದ ಹಿಂದಿನ ದರಕ್ಕೆ ಕುಸಿದ ಕಾಫಿ ಮಾರುಕಟ್ಟೆ!
ಫೆಬ್ರವರಿ 2024ರಲ್ಲಿ ಸಾರ್ವಕಾಲಿಕ ದಾಖಲೆ ಬೆಲೆ ಕಂಡಿದ್ದ ಕಾಫಿ ಧಾರಣೆ, ಇದೀಗ 2024ರ ಮೇ ತಿಂಗಳಲ್ಲಿದ್ದ ಮಟ್ಟಕ್ಕೆ ಕುಸಿದಿದೆ. ಅಂದು 50 ಕೆ.ಜಿ. ರೋಬಸ್ಟಾ ಚೆರಿ ₹13,900ಕ್ಕೆ ಮಾರಾಟವಾಗಿದ್ದರೆ, ರೋಬಸ್ಟಾ ಪಾರ್ಚ್‌ಮೆಂಟ್ ₹29,000 ಹಾಗೂ ಅರೇಬಿಕಾ ಪಾರ್ಚ್‌ಮೆಂಟ್ ₹30,000ದವರೆಗೆ ತಲುಪಿತ್ತು. ಒಂದು ಹಂತದಲ್ಲಿ ರೋಬಸ್ಟಾ ಪಾರ್ಚ್‌ಮೆಂಟ್ ಬೆಲೆಯು ಅರೇಬಿಕಾ ದರವನ್ನೂ ಮೀರಿಸಿದ್ದು ಕಾಫಿ ಇತಿಹಾಸದಲ್ಲಿಯೇ ಮೊದಲು.
ಆದರೆ, ಮತ್ತಷ್ಟು ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ಶೇ.50ರಷ್ಟು ಕಾಫಿ ಬೆಳೆಗಾರರು ತಮ್ಮ ಬೆಳೆ ಮಾರಾಟ ಮಾಡದೆ ದಾಸ್ತಾನು ಮಾಡಿಕೊಂಡಿದ್ದರು. ಕಳೆದ ವರ್ಷ ಬ್ರೆಜಿಲ್‌ನಲ್ಲಿ ಹಿಮಪಾತದಿಂದಾಗಿ ಕಾಫಿ ತೋಟಗಳು ನಾಶವಾಗಿ, ಅಂತರರಾಷ್ಟ್ರೀಯ ಪೂರೈಕೆ ಕಡಿಮೆಯಾಗಿದ್ದರಿಂದ ಭಾರತದಲ್ಲಿ ಕಾಫಿ ದರ (Coffee Rate) ಗಗನಕ್ಕೇರಿತ್ತು. ಆಗ ಬೇಗನೆ ಮಾರಾಟ ಮಾಡಿ ನಷ್ಟ ಅನುಭವಿಸಿದ್ದರಿಂದ, ಈ ವರ್ಷ ಕಾದು ನೋಡುವ ತಂತ್ರ ಅನುಸರಿಸಿದ್ದರು. ಆದರೆ, ಈ ಬಾರಿ ಬ್ರೆಜಿಲ್‌ನಲ್ಲಿ ಉತ್ತಮ ಇಳುವರಿ ಮತ್ತು ಕೊಯ್ಲು ಆರಂಭವಾಗಿರುವ ಬೆನ್ನಲ್ಲೇ ಬೆಲೆಗಳು ದಿನದಿಂದ ದಿನಕ್ಕೆ ಇಳಿಯುತ್ತಿರುವುದು, ದಾಸ್ತಾನು ಮಾಡಿಕೊಂಡಿರುವ ಬೆಳೆಗಾರರಿಗೆ ಭಾರಿ ಆರ್ಥಿಕ ನಷ್ಟವನ್ನು ತಂದಿದೆ.
Coffee Rate: ಪ್ರಸ್ತುತ ಮಾರುಕಟ್ಟೆ ದರಗಳು (50 ಕೆ.ಜಿ ಚೀಲಕ್ಕೆ) as on 17.07.2025
- ರೊಬಸ್ಟಾ ಚೆರಿ: ₹8,700 (ಫೆಬ್ರವರಿಯಲ್ಲಿ ₹13,900)
- ರೊಬಸ್ಟಾ ಪಾರ್ಚ್‌ಮೆಂಟ್: ₹16,900 (ಫೆಬ್ರವರಿಯಲ್ಲಿ ₹29,000)
- ಅರೇಬಿಕಾ ಚೆರಿ: ₹12,750 (ಫೆಬ್ರವರಿಯಲ್ಲಿ ₹15,500)
- ಅರೇಬಿಕಾ ಪಾರ್ಚ್‌ಮೆಂಟ್: ₹24,500 (ಫೆಬ್ರವರಿಯಲ್ಲಿ ₹30,000)
ಸಕಲೇಶಪುರ, ಚಿಕ್ಕಮಗಳೂರು, ಕೊಡಗು, ಮತ್ತು ಕೇರಳದ ವಯನಾಡಿನಂತಹ ಪ್ರಮುಖ ಕಾಫಿ ಮಾರುಕಟ್ಟೆಗಳಲ್ಲಿಯೂ ದರಗಳು ಗಣನೀಯವಾಗಿ ಕುಸಿದಿರುವುದು ಕಂಡುಬಂದಿದೆ. ಅರೇಬಿಕಾ ತಳಿಗಳ ದರಗಳು ಕುಸಿತ ಕಂಡಿದ್ದರೂ, ರೋಬಸ್ಟಾ ಕಾಫಿಯಷ್ಟು ತೀವ್ರ ಇಳಿಕೆಯನ್ನು ಕಂಡಿಲ್ಲ.
ಬೆಳೆಗಾರರ ನೋವು ಮತ್ತು ತಜ್ಞರ ಸಲಹೆ
“ಕಳೆದ ವರ್ಷ ಬೇಗ ಕಾಫಿ ಕೊಟ್ಟು ನಷ್ಟ ಅನುಭವಿಸಿದ್ದೆವು. ಈ ವರ್ಷ ಮತ್ತಷ್ಟು ದರ ಏರಿಕೆಯ ನಿರೀಕ್ಷೆಯಲ್ಲಿದ್ದಾಗ ದಿಢೀರ್ ಮಾರುಕಟ್ಟೆ ಕುಸಿತದಿಂದ ಅನಿವಾರ್ಯವಾಗಿ ಕಡಿಮೆ ಬೆಲೆಗೆ ಕಾಫಿಯನ್ನು ಮಾರಾಟ ಮಾಡಬೇಕಾಯಿತು. ಇದು ತೀವ್ರ ಆರ್ಥಿಕ ಸಂಕಷ್ಟಕ್ಕೆ ದೂಡಿದೆ” ಎಂದು ಸಕಲೇಶಪುರದ ಕಾಫಿ ಬೆಳೆಗಾರರಾದ ಸಂತೋಷ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಕಲೇಶಪುರದ ಕಾಫಿ ಬೋರ್ಡ್ ನಿರ್ದೇಶಕ ಬಸವರಾಜ್ ಅವರು, “ಇಂದಿನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾಫಿ ಬೆಲೆ ಏರಿಳಿತ ಸಾಮಾನ್ಯವಾಗಿದೆ. ಬೆಳೆಗಾರರು ಹೆಚ್ಚಿನ ಬೆಲೆ ನಿರೀಕ್ಷೆ ಮಾಡದೆ, ಪ್ರಸ್ತುತ ಬೆಲೆ ತೃಪ್ತಿ ಎನಿಸಿದರೆ ಹಂತ ಹಂತವಾಗಿ ಮಾರಾಟ ಮಾಡುವುದು ಉತ್ತಮ” ಎಂದು ಸಲಹೆ ನೀಡಿದ್ದಾರೆ.
ಈ ಅನಿಶ್ಚಿತ ಪರಿಸ್ಥಿತಿಯಲ್ಲಿ, ಕಾಫಿ ಬೆಳೆಗಾರರು ತಮ್ಮ ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಬೆಳೆಯ ಗುಣಮಟ್ಟವನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿದೆ.
Coffee Rate: ಕಾಫಿ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳು
ಕಾಫಿ ಬೆಲೆ ಕುಸಿತಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕೆಲವು ಪ್ರಮುಖ ಬೆಳವಣಿಗೆಗಳು ನೇರವಾಗಿ ಕಾರಣವಾಗಿವೆ:
- ಬ್ರೆಜಿಲ್‌ನಲ್ಲಿ ಹೇರಳ ಇಳುವರಿ ನಿರೀಕ್ಷೆ: ವಿಶ್ವದ ಅತಿದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾದ ಬ್ರೆಜಿಲ್‌ನಲ್ಲಿ ಈ ವರ್ಷ ಕಾಫಿ ಉತ್ಪಾದನೆ ದಾಖಲೆ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ. ಉತ್ತಮ ಹವಾಮಾನ ಪರಿಸ್ಥಿತಿಗಳು ಮತ್ತು ಹೆಚ್ಚಿನ ಕೃಷಿ ಪ್ರದೇಶವು ಬ್ರೆಜಿಲ್‌ನ ಕಾಫಿ ಇಳುವರಿಯನ್ನು ಹೆಚ್ಚಿಸಿದ್ದು, ಇದು ಜಾಗತಿಕ ಮಾರುಕಟ್ಟೆಗೆ ಹೆಚ್ಚಿನ ಪೂರೈಕೆಯನ್ನು ತಂದಿದೆ. ಹೆಚ್ಚುವರಿ ಪೂರೈಕೆಯು ಸ್ವಾಭಾವಿಕವಾಗಿ ಬೆಲೆಗಳ ಕುಸಿತಕ್ಕೆ ಕಾರಣವಾಗಿದೆ.
- ವಿಯೆಟ್ನಾಂನಿಂದ ರಫ್ತು ಹೆಚ್ಚಳ: ರೋಬಸ್ಟಾ ಕಾಫಿಯ ಪ್ರಮುಖ ಉತ್ಪಾದಕನಾದ ವಿಯೆಟ್ನಾಂ ಸಹ ಈ ವರ್ಷ ಉತ್ತಮ ಇಳುವರಿಯನ್ನು ಕಂಡಿದೆ. ಹೆಚ್ಚಿದ ಇಳುವರಿಯನ್ನು ವಿಯೆಟ್ನಾಂ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಇದು ರೋಬಸ್ಟಾ ಕಾಫಿಯ ಬೆಲೆಗಳ ಮೇಲೆ ಗಣನೀಯ ಒತ್ತಡವನ್ನು ಸೃಷ್ಟಿಸಿದೆ.
- ಜಾಗತಿಕ ಆರ್ಥಿಕ ಹಿಂಜರಿಕೆ ಆತಂಕ: ಜಾಗತಿಕ ಆರ್ಥಿಕತೆಯಲ್ಲಿ ಮಂದಗತಿಯ ಆತಂಕಗಳು ಕಾಫಿಯಂತಹ ಸರಕುಗಳ ಬೇಡಿಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿವೆ. ಆರ್ಥಿಕ ಅನಿಶ್ಚಿತತೆಯು ಗ್ರಾಹಕರ ಖರ್ಚುಗಳನ್ನು ಕಡಿಮೆ ಮಾಡುವಂತೆ ಮಾಡುತ್ತದೆ, ಇದು ಕಾಫಿಯ ಬೇಡಿಕೆ ಮತ್ತು ಬೆಲೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
- ಡಾಲರ್ ಎದುರು ರೂಪಾಯಿ ಮೌಲ್ಯದ ಏರಿಳಿತ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ವ್ಯಾಪಾರವು ಡಾಲರ್‌ನಲ್ಲಿ ನಡೆಯುತ್ತದೆ. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಆಗುವ ಏರಿಳಿತಗಳು ರಫ್ತುದಾರರಿಗೆ ಮತ್ತು ಆಮದುದಾರರಿಗೆ ಬೆಲೆಯಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತವೆ, ಇದು ಸ್ಥಳೀಯ ಬೆಲೆಗಳ ಮೇಲೂ ಪರಿಣಾಮ ಬೀರುತ್ತದೆ.
ಕರ್ನಾಟಕದ ಬೆಳೆಗಾರರ ಮೇಲೆ ಪರಿಣಾಮ
ಸಕಲೇಶಪುರ, ಚಿಕ್ಕಮಗಳೂರು, ಕೊಡಗು ಸೇರಿದಂತೆ ರಾಜ್ಯದ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ರೈತರು ಇತ್ತೀಚಿನ ಬೆಲೆ ಕುಸಿತದಿಂದ ತೀವ್ರ ನಷ್ಟ ಅನುಭವಿಸಿದ್ದಾರೆ. ಒಂದು ಕಡೆ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ (ಕಾರ್ಮಿಕರ ಕೂಲಿ, ಗೊಬ್ಬರ, ಕೀಟನಾಶಕ ಬೆಲೆ ಏರಿಕೆ), ಮತ್ತೊಂದೆಡೆ ಇಳುವರಿಗೂ ತಕ್ಕ ಬೆಲೆ ಸಿಗದಿರುವುದು ಅವರ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ. ಮುಂದಿನ ಬೆಳೆಗಾಗಿ ಬಂಡವಾಳ ಹೂಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.
ಬರುವ ವರ್ಷ ಕಾಫಿ ದರ ಹೇಗೆ ಇರಬಹುದು??
ಕಾಫಿ ಬೆಲೆಗಳ ಕುಸಿತವು ತಾತ್ಕಾಲಿಕವೇ ಅಥವಾ ದೀರ್ಘಕಾಲಿಕವೇ ಎಂದು ಹೇಳಲು ಕಷ್ಟ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪೂರೈಕೆ ಮತ್ತು ಬೇಡಿಕೆಯ ಸಮತೋಲನ, ಬ್ರೆಜಿಲ್ ಮತ್ತು ವಿಯೆಟ್ನಾಂನ ಮುಂದಿನ ಇಳುವರಿ ಮುನ್ಸೂಚನೆಗಳು ಮತ್ತು ಜಾಗತಿಕ ಆರ್ಥಿಕ ಸ್ಥಿತಿಗತಿಗಳು ಕಾಫಿ ಬೆಲೆಗಳ ಭವಿಷ್ಯವನ್ನು ನಿರ್ಧರಿಸಲಿವೆ. ಈ ಸವಾಲಿನ ಸಮಯದಲ್ಲಿ, ಬೆಳೆಗಾರರು ತಮ್ಮ ಬೆಳೆ ನಿರ್ವಹಣಾ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಸರ್ಕಾರವು ರೈತರ ನೆರವಿಗೆ ಧಾವಿಸಿ, ಬೆಲೆ ಸ್ಥಿರೀಕರಣ ನಿಧಿ ಅಥವಾ ಪರ್ಯಾಯ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸಲು ಮುಂದಾಗಬೇಕು ಎಂಬುದು ರೈತರ ಒತ್ತಾಯವಾಗಿದೆ.
ಇಂತಹ ಹೆಚ್ಚಿನ ಪ್ರಮುಖ ಅಂತಾರಾಷ್ಟ್ರೀಯ ಮತ್ತು ಆರ್ಥಿಕ ಸುದ್ದಿಗಳಿಗಾಗಿ quicknewztoday.com ಭೇಟಿ ಮಾಡಿ ಮತ್ತು ಇಂತಹ ವಿಶೇಷ ಸುದ್ದಿ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button 👇