GST ಕಿರಿಕ್: ಸಣ್ಣಪುಟ್ಟ ವ್ಯಾಪಾರಿಗಳಿಗೆ ವಾಣಿಜ್ಯ ಇಲಾಖೆ ನೀಡಿರುವ ಲಕ್ಷಾಂತರ ರೂಪಾಯಿ ಜಿಎಸ್‌ಟಿ ನೋಟಿಸ್‌ಗಳ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ವಾಣಿಜ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ಸಣ್ಣ ವ್ಯಾಪಾರಸ್ಥರು ಜುಲೈ 23ರಿಂದ ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಜುಲೈ 25ರಂದು ಬೆಂಗಳೂರಿನಲ್ಲಿ ಬೃಹತ್ ಬಂದ್ ಮತ್ತು ಪ್ರತಿಭಟನೆಗೆ ಕರೆ ನೀಡಿದ್ದಾರೆ ಇಲ್ಲಿದೆ ಅದರ ಕಂಪ್ಲೀಟ್ ಡೀಟೇಲ್ಸ್ ನೋಡಿ.
GST ನೋಟಿಸ್‌ಗಳ ಹಿಂದಿನ ಕಾರಣ:
ವಾಣಿಜ್ಯ ಇಲಾಖೆಯು ಯುಪಿಐ (UPI) ಮೂಲಕ ವರ್ತಕರು 2021-22ರಿಂದ 2024-25ರ ಸಾಲಿನಲ್ಲಿ ನಡೆಸಿರುವ ವಹಿವಾಟಿನ ವಿವರಗಳನ್ನು ಸೇವಾ ಪೂರೈಕೆದಾರರಿಂದ ಸಂಗ್ರಹಿಸಿದೆ. ಈ ಪೈಕಿ, ವಾರ್ಷಿಕ 40 ಲಕ್ಷ ರೂ.ಗಳಿಗಿಂತ ಹೆಚ್ಚಿನ ವಹಿವಾಟು ನಡೆಸಿ, ಸರಕು ಮತ್ತು ಸೇವಾ ತೆರಿಗೆ ಕಾಯಿದೆ-2017ರ ಅಡಿಯಲ್ಲಿ ನೋಂದಣಿ ಮಾಡಿಸದೆ ಹಾಗೂ ತೆರಿಗೆ ಪಾವತಿಸದ ವರ್ತಕರಿಗೆ ಸುಮಾರು 40 ಲಕ್ಷದಿಂದ 1 ಕೋಟಿ ರೂ. ವರೆಗೆ ದಂಡ ಸಮೇತ ಜಿಎಸ್‌ಟಿ ಕಟ್ಟುವಂತೆ ನೋಟಿಸ್ ನೀಡಲಾಗಿದೆ. ಈ ಕ್ರಮದಿಂದ ಕಾಂಡಿಮೆಂಟ್ಸ್, ತರಕಾರಿ, ಹೂವು, ಹಣ್ಣು, ಹಾಲು, ಬೇಕರಿ, ಪಾನಿಪುರಿ, ಫಾಸ್ಟ್‌ಫುಡ್, ಮಾಂಸದ ಅಂಗಡಿ ಸೇರಿದಂತೆ ಹಲವು ಸಣ್ಣ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
GST ಪ್ರತಿಭಟನೆಯ ಸ್ವರೂಪ:
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ನೇತೃತ್ವದಲ್ಲಿ ವ್ಯಾಪಾರಸ್ಥರು ಜುಲೈ 23 ಮತ್ತು 24ರಂದು ತಮ್ಮ ಅಂಗಡಿಗಳಲ್ಲಿ ಕಪ್ಪು ಪಟ್ಟಿ ಧರಿಸಿ ವ್ಯಾಪಾರ ಮಾಡುವ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದಾರೆ. ಇದರ ಮುಂದುವರಿದ ಭಾಗವಾಗಿ, ಜುಲೈ 25ರಂದು ಸ್ವಯಂಪ್ರೇರಣೆಯಿಂದ ತಮ್ಮ ಎಲ್ಲಾ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. “NO UPI, ONLY CASH” ಎಂಬ ಘೋಷಣೆಯೊಂದಿಗೆ ಕೆಲವರು ಯುಪಿಐ ಪಾವತಿಗಳನ್ನು ನಿರಾಕರಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
“ನೋಟಿಸ್ ಪಡೆದವರೆಲ್ಲ GST ಪಾವತಿಸುವ ಅಗತ್ಯವಿಲ್ಲ” – ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ:
ಈ ಪ್ರತಿಭಟನೆಗಳ ಕರೆ ಮಧ್ಯೆಯೇ, ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ) ಸೀಮಾ ಪಂಡಿತ್ ಅವರು ವರ್ತಕರ ಆತಂಕವನ್ನು ನಿವಾರಿಸುವ ಪ್ರಯತ್ನ ಮಾಡಿದ್ದಾರೆ. ಕೋರಮಂಗಲದ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ನಡೆದ ‘ಜಿಎಸ್‌ಟಿ ಅರಿವು ಕಾರ್ಯಾಗಾರ’ದಲ್ಲಿ ವರ್ತಕರೊಂದಿಗೆ ಸಂವಾದ ನಡೆಸಿದ ಅವರು, “ಯುಪಿಐ ಮೂಲಕ ವಾರ್ಷಿಕ 40 ಲಕ್ಷ ರೂ. ವಹಿವಾಟು ನಡೆಸಿದ ಎಲ್ಲರಿಗೂ ಜಿಎಸ್‌ಟಿ ತೆರಿಗೆ ಪಾವತಿಸಬೇಕೆಂದು ನೋಟಿಸ್ ನೀಡಿದ ಮಾತ್ರಕ್ಕೆ ಹೆದರುವ ಅಗತ್ಯವಿಲ್ಲ. ಇದರಲ್ಲಿ ತೆರಿಗೆ ಬಾಧ್ಯತೆಯಿಂದ ಹೊರಗಿದ್ದವರೂ ಇದ್ದಾರೆ. ಅಂಥವರು ದಾಖಲೆಗಳೊಂದಿಗೆ ಉತ್ತರ ನೀಡಬಹುದು” ಎಂದು ಸ್ಪಷ್ಟಪಡಿಸಿದ್ದಾರೆ.
“ನಾವು ಒಟ್ಟಾರೆ ಸರಕು ವಹಿವಾಟು 40 ಲಕ್ಷ ರೂ. ಹಾಗೂ ಸೇವಾ ತೆರಿಗೆ 20 ಲಕ್ಷ ರೂ. ಮೀರಿದ ಎಲ್ಲರಿಗೂ ನೋಟಿಸ್ ನೀಡಿದ್ದೇವೆ. ತೆರಿಗೆ ಬಾಧ್ಯತೆಯನ್ನು ಕಟ್ಟಲೇ ಬೇಕು ಎಂದು ಹೇಳುತ್ತಿಲ್ಲ, ಆ ನೋಟಿಸ್‌ಗೆ ಉತ್ತರಿಸಬೇಕು. ಯಾವ ಮೂಲಗಳಿಂದ ಹಣ ಪಡೆಯಲಾಗಿದೆ ಎಂಬುದನ್ನು ದಾಖಲೆಯೊಂದಿಗೆ ಮನವರಿಕೆ ಮಾಡಿಕೊಡಬೇಕು” ಎಂದ ಅವರು, ಹಾಲು, ಮಾಂಸ, ಹೂವು, ಹಣ್ಣು, ತರಕಾರಿ, ಎಂಆರ್‌ಪಿ ಬೆಲೆಯಲ್ಲಿ ಮದ್ಯ ಮಾರಾಟ ಮಾಡುವವರು 40 ಲಕ್ಷ ರೂ. ವಹಿವಾಟು ಮೀರಿದ್ದರೂ ಜಿಎಸ್‌ಟಿ ಕಟ್ಟುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು. ಆದರೆ, ಈ ತೆರಿಗೆ ರಹಿತ ವಸ್ತುಗಳೊಂದಿಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಬೇರೆ ಯಾವುದೇ ವಸ್ತುವನ್ನು ಮಾರಾಟ ಮಾಡಿದರೆ ಅದಕ್ಕೆ ಜಿಎಸ್‌ಟಿ ಅನ್ವಯಿಸುತ್ತದೆ ಎಂದು ವಿವರಿಸಿದರು.
“ಕೆಲವರು ವಾರ್ಷಿಕ ವಹಿವಾಟಿಗೂ ಶೇ.18ರಷ್ಟು ಜಿಎಸ್‌ಟಿ ವಿಧಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಯಮಗಳ ಪ್ರಕಾರ ನಾವು ಒಮ್ಮೆ ತೆರಿಗೆ ವಿಧಿಸಿದ ಬಳಿಕ ಅದನ್ನು ಇಳಿಸಬಹುದೇ ಹೊರತು ಏರಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ವರ್ತಕರು ತಮ್ಮಲ್ಲಿನ ವಹಿವಾಟಿನ ಮಾಹಿತಿ ನೀಡಿದಾಗ ಅದರಲ್ಲಿ ಶೇ.5, ಶೇ. 12 ಮತ್ತು ತೆರಿಗೆ ಇಲ್ಲದ ಸರಕುಗಳ ವ್ಯವಹಾರವನ್ನು ಪರಿಶೀಲಿಸಿ ಅದಕ್ಕೆ ಅನುಗುಣವಾಗಿ ತೆರಿಗೆ ಸರಿಪಡಿಸಲಾಗುವುದು” ಎಂದು ಸೀಮಾ ಪಂಡಿತ್ ಭರವಸೆ ನೀಡಿದರು.
(GST) ಜಿಎಸ್‌ಟಿ ನೋಂದಣಿ ಹೇಗೆ?
ಜಿಎಸ್‌ಟಿ ನೋಂದಣಿ ಆನ್‌ಲೈನ್ ಮೂಲಕವೇ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 080-25714833 ಅಥವಾ 9845370404 ಸಂಖ್ಯೆಗಳಿಗೆ ಕರೆ ಮಾಡಬಹುದು.
ಸ್ಕ್ಯಾನರ್ ತೆಗೆದರೆ ನಷ್ಟವೇ ಹೊರತು ಲಾಭವಿಲ್ಲ:
ವ್ಯಾಪಾರಿಗಳು ಯುಪಿಐ (UPI) ಸ್ಕ್ಯಾನರ್ ತೆಗೆದಿಟ್ಟ ಮಾತ್ರಕ್ಕೆ ಜಿಎಸ್‌ಟಿಯಿಂದ ಪಾರಾಗುತ್ತೇವೆ ಎಂಬುದು ತಪ್ಪು ಕಲ್ಪನೆ ಎಂದು ಜಂಟಿ ಆಯುಕ್ತರು ತಿಳಿಸಿದ್ದಾರೆ. ಇದರಿಂದ ವ್ಯಾಪಾರಕ್ಕೆ ನಷ್ಟವೇ ಹೊರತು ಜಿಎಸ್‌ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಹಳೆಯ ಬಡ್ಡಿ-ದಂಡಕ್ಕೆ ವಿನಾಯಿತಿ ಇಲ್ಲ:
ಹಲವು ವರ್ತಕರು ಹಳೆಯ ಬಡ್ಡಿ ಸಹಿತ ದಂಡದ ಲೆಕ್ಕವನ್ನು ಮನ್ನಾ ಮಾಡಿ ಹೊಸದಾಗಿ ತೆರಿಗೆ ವಿಧಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೀಮಾ ಪಂಡಿತ್, “ಈ ಬಗ್ಗೆ ನಾವು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕು. ಸದ್ಯದ ನಿಯಮಗಳ ಪ್ರಕಾರ ಬಡ್ಡಿ ಸಹಿತ ದಂಡ ಕಟ್ಟಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಒಟ್ಟಾರೆ, ಯುಪಿಐ ವಹಿವಾಟುಗಳ ಆಧಾರದ ಮೇಲೆ ಜಿಎಸ್‌ಟಿ ನೋಟಿಸ್‌ಗಳಿಂದ ಸಣ್ಣ ವ್ಯಾಪಾರಿಗಳು ಆತಂಕಕ್ಕೊಳಗಾಗಿದ್ದಾರೆ. ವಾಣಿಜ್ಯ ಇಲಾಖೆ ಸ್ಪಷ್ಟನೆ ನೀಡಿದರೂ, ವ್ಯಾಪಾರಿಗಳು ತಮ್ಮ ಪ್ರತಿಭಟನೆಯ ನಿರ್ಧಾರವನ್ನು ಮುಂದುವರಿಸಿದ್ದಾರೆ. ಈ ಪರಿಸ್ಥಿತಿ ಹೇಗೆ ಇತ್ಯರ್ಥವಾಗುತ್ತದೆ ಎಂಬುದನ್ನು ಕಾದು ನೋಡಬೇಕು.
👉Read More Govt Schemes News/ ಇನ್ನಷ್ಟು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸುದ್ದಿ ಓದಿ
🔗Gruha Jyothi Yojana: ಮನೆ ಬದಲಿಸಿದರೆ ಗೃಹಜ್ಯೋತಿ ಯೋಜನೆಯ ಲಾಭ ಹೇಗೆ ಪಡೆಯುವುದು? ಇಲ್ಲಿದೆ ಸಂಪೂರ್ಣ ಮಾಹಿತಿ!
🔗Podi Nakashe: ನಿಮ್ಮ ಜಮೀನಿನ ಪೋಡಿ ನಕ್ಷೆ ಈಗ ಮೊಬೈಲ್‌ನಲ್ಲೇ ಪಡೆಯಿರಿ! ಇಲ್ಲಿದೆ ಸಂಪೂರ್ಣ ಸರಳ ವಿಧಾನ
🔗(E-Swathu) ಇ-ಸ್ವತ್ತು ಕರ್ನಾಟಕ: ಗ್ರಾಮೀಣ ಕೃಷಿಯೇತರ ಆಸ್ತಿಗೆ ಕಡ್ಡಾಯವಾದ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ?
ಇಂತಹ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ/ಸರ್ಕಾರಿ ಉದ್ಯೋಗ ನೋಟಿಫಿಕೇಶನ್‌ಗಳನ್ನು ತಕ್ಷಣವೇ ಪಡೆಯಲು!WhatsApp, Facebook & Telegram ಗ್ರೂಪ್‌ಗಳಿಗೆ ಸೇರಿ. Click to Join Below Button👇